ಜ್ಯಾನ್‍ಸನ್ ಪಂಥ -
ಮನುಷ್ಯನಲ್ಲಿ ಸ್ವತಂತ್ರ ಸಂಕಲ್ಪ ಶಕ್ತಿ (ಫ್ರೀ ವಿಲ್) ಇಲ್ಲವೆಂದೂ ದೈವೀಕೃಪೆಯನ್ನು (ಗ್ರೇಸ್) ನಿರೋಧಿಸುವುದು ಅಸಾಧ್ಯವೆಂದೂ ಮುಖ್ಯವಾಗಿ ಪ್ರತಿಪಾದಿಸುವ, ಸಂಪ್ರದಾಯ ವಿರೋಧಿ ಒಲುಮೆಗಳಿದ್ದ ಕ್ರೈಸ್ತಧರ್ಮಗಳೊಳಗಿನ ಒಂದು ಆಂತರಿಕ ಪಂಥ. ಇದರ ಪ್ರತಿಪಾದಕ ಕಾನ್ರ್ಯಾಲಿಸ್ ಯಾನ್ಸನ್ (1585-1638).

ಕೃಪೆಗೆ ಸಂಬಂಧಪಡದ ಇತರ ಕೆಲವು ಉದ್ದೇಶಗಳನ್ನೂ ಯಾನ್‍ಸನ್ ಮತ್ತವನ ಅನುಯಾಯಿಗಳು ಇಟ್ಟುಕೊಂಡಿದ್ದರು. ಧರ್ಮಸಿದ್ಧಾಂತ ಮತ್ತು ಶಿಸ್ತನ್ನು ಪ್ರಾಚೀನ ಧರ್ಮಸಭೆಯಲ್ಲಿದ್ದ ಹಾಗೆ ಪುನಃ ಸ್ಥಾಪಿಸುವ ಗುರಿಯನ್ನು ಇಟ್ಟುಕೊಂಡ ಪಂಥ ತಮ್ಮದು ಎಂದು ಇವರು ಹೇಳಿಕೊಳ್ಳುತ್ತಿದ್ದರು. ಹೊಸ ಚರ್ಚುಗಳನ್ನು ಸ್ಥಾಪಿಸಿ ಧರ್ಮಸಭೆಯ ಪ್ರಾಚೀನ ಸಂಪ್ರದಾಯ, ನಂಬಿಕೆಗಳನ್ನು ಮತ್ತೆ ನೆಲೆಗೊಳಿಸುತ್ತೇವೆ ಎಂದು ರೆಫರ್ಮೇಷನ್ ಕಾಲದ ಸಂಪ್ರದಾಯವಿರೋಧಿಗಳು ಹೇಳಿದ್ದರು. ಜ್ಯಾನ್‍ಸನ್ ಪಂಥದವರು ಕ್ಯಾತೊಲಿಕ್ ಚರ್ಚಿನಲ್ಲಿ ಉಳಿದುಕೊಂಡೇ ಆ ಕೆಲಸವನ್ನು ಮಾಡಬೇಕೆಂಬ ಉದ್ದೇಶವಿದ್ದವರು. ರೆಫರ್ಮೇಷನ್ ಕಾಲದ ನೂತನರಿಗೆ ಬೈಬಲ್ಲೇ ಪರಮಪ್ರಮಾಣವಾಗಿತ್ತಾಗಿ, ಸಂಪ್ರದಾಯವನ್ನು ಅವರು ತುಚ್ಛೀಕರಿಸಿದರು. ಜ್ಯಾನ್‍ಸನ್ ಪಂಥದವರಿಗೆ ಸಂಪ್ರದಾಯವೇ ಸರ್ವಸಮರ್ಪಕ ಪ್ರಮಾಣವಾಯಿತು. ವಾಸ್ತವವಾಗಿ ಸೇಂಟ್ ಅಗಸ್ಟೇನ್ ಮತ್ತು ಧರ್ಮಸಭೆಯ ಪಾಶ್ಚಾತ್ಯ ಪಿತೃಗಳನ್ನು ಮಾತ್ರ ಯಾನ್‍ಸನ್ ಕಡೆಯವರು ಒಪ್ಪಿಕೊಂಡಿದ್ದರು.

ಜ್ಯಾನ್‍ಸನ್ ಸಿದ್ಧಾಂತದ ಮುಖ್ಯ ತತ್ತ್ವಗಳಿವು: ಆ್ಯಡಮ್ ಮತ್ತು ಈವರ ಪಾಪದ ಅನಂತರ ಪತಿತನಾದ ಮಾನವನ ಸಂಕಲ್ಪಶಕ್ತಿಯ ಮೇಲೆ ಎರಡು ಆಂತರಿಕ ಪ್ರಭಾವಗಳು ಅಧಿಕಾರ ನಡೆಸುತ್ತವೆ. ವ್ಯಕ್ತಿ ಒಳಿತನ್ನು ಮಾಡುವಂತೆ ಪ್ರೇರಿಸುವ ಸ್ವರ್ಗೀಯ ಆಕರ್ಷಣೆ ಮತ್ತು ಕೆಡುಕನ್ನು ಮಾಡುವಂತೆ ಪ್ರೇರಿಸುವ ಐಹಿಕ ಆಕರ್ಷಣೆ. ಮನುಷ್ಯ ಏನನ್ನಾದರೂ ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಎರಡು ಆಕರ್ಷಣೆಗಳ ಪೈಕಿ ಹೆಚ್ಚು ಪ್ರಬಲವಾಗಿರುವುದನ್ನು ಸಂಕಲ್ಪಶಕ್ತಿ ಅನಿವಾರ್ಯವಾಗಿ ಅನುಸರಿಸುತ್ತದೆ. ಹೆಚ್ಚೆಂದರೆ ಬಾಹ್ಯನಿರ್ಬಂಧಗಳಿಂದಷ್ಟೆ ಸಂಕಲ್ಪಶಕ್ತಿ ಸ್ವತಂತ್ರವಾಗಿದೆ, ಆಂತರಿಕ ಆಕರ್ಷಣೆಗಳಿಗೆ ಮಣಿದು ಮಾನವ ತನ್ನ ಆಯ್ಕೆಯನ್ನು ನಿರ್ವಹಿಸಬೇಕಾಗಿದೆ. (ಸಾಂಪ್ರದಾಯಿಕ ಕ್ಯಾತೊಲಿಕ್ ಕಲ್ಪನೆಯಂತೆ ಸಂಕಲ್ಪಶಕ್ತಿಯ ಸ್ವಾತಂತ್ರ್ಯವೆಂದರೆ ಆಯ್ಕೆಯ ಕಾಲದಲ್ಲಿ ಒಳಿತು ಅಥವಾ ಕೆಡಕುಗಳಲ್ಲಿ ವ್ಯಕ್ತಿ ಇಷ್ಟಪಟ್ಟದ್ದನ್ನು ಆಂತರಿಕ ನಿರ್ಬಂಧವಿಲ್ಲದೆ ಆರಿಸುವ ಪೂರ್ಣ ಸಾಧ್ಯತೆ.)

ಈ ಸಿದ್ಧಾಂತದ ಇನ್ನೊಂದು ಮುಖವೆಂದರೆ ಪರ್ಯಾಪ್ತ ಕೃಪೆಯ (ಸಫಿಷಿಯೆಂಟ್ ಗ್ರೇಸ್) ಪ್ರಶ್ನೆ. (ಸಾಂಪ್ರದಾಯಿಕ ಕ್ಯಾತೊಲಿಕ್ ಕಲ್ಪನೆಯಂತೆ ಈ ಕೃಪೆ ಸತ್ಕಾರ್ಯವನ್ನು ಮಾಡಲು ವ್ಯಕ್ತಿಗೆ ಸಹಾಯ ಮಾಡುತ್ತದೆ. ಆದರೆ ವ್ಯಕ್ತಿ ಸಹಕರಿಸದಿದ್ದರೆ ಈ ಕೃಪೆ ನಿಷ್ಪ್ರಯೋಜಕವಾಗುತ್ತದೆ.) ಜ್ಯಾನ್‍ಸನ್ ಪಂಥದವರು ಈ ಕೃಪೆಯ ಅಸ್ತಿತ್ವವನ್ನು ಒಪ್ಪುವುದಿಲ್ಲ. ಕೃಪೆ ಅಥವಾ ಹಿತದತ್ತ ಪ್ರೇರೇಪಣೆ ಮತ್ತು ಕೆಡುಕಿನತ್ತ ಪ್ರೇರೇಪಣೆ ಇಲ್ಲವೆ ಪ್ರಲೋಭನೆ-ಇವೆರಡರಲ್ಲಿ ಯಾವುದು ಆ ಕ್ಷಣದಲ್ಲಿ ಪ್ರಬಲವಾಗಿದೆಯೋ ಅದನ್ನು ವ್ಯಕ್ತಿ ಅನಿವಾರ್ಯವಾಗಿ ಅನುಸರಿಸಬೇಕು. ಮೊದಲನೆಯದು ಪ್ರಬಲವಾದರೆ ವ್ಯಕ್ತಿ ಅನಿವಾರ್ಯವಾಗಿ ಒಳಿತನ್ನು ಮಾಡಬೇಕಾಗುತ್ತದೆ; ಎರಡನೆಯದಾದರೆ ಕೆಡುಕನ್ನು ಮಾಡಬೇಕಾಗುತ್ತದೆ. ಆಂತರಿಕ ಕೃಪೆಯನ್ನು ನಿರೋಧಿಸುವುದು ಅಸಾಧ್ಯ. ಆದುದರಿಂದ ಮುಕ್ತಿ ಎಂದರೆ ಮನುಷ್ಯ ಸ್ವೇಚ್ಛೆಯಿಂದ ಮಾಡಿದ ಆಯ್ಕೆ ಅಲ್ಲ (ಇದು ಸಾಂಪ್ರದಾಯಿಕ ವಾದ). ಮುಕ್ತಿ ಎಂದರೆ ತನ್ನಿಂದ ನಿರೋಧಿಸಲಸಾಧ್ಯವಾದ ದೈವೀ ಕೃಪೆಯನ್ನು ವಿಧಿ ಇಲ್ಲದೆ ಒಪ್ಪುವುದು. ನೀತಿವಂತರಿಗೂ ಎಲ್ಲ ಕಾಲದಲ್ಲಿ ದೇವರ ನಿಯಮಗಳನ್ನು ಅನುಸರಿಸುವುದು ಅಸಾಧ್ಯವಾಗುತ್ತದೆ.

ಸೆಮಿಪೆಲೇಜಿಯನ್ ಎಂಬ ಪಂಥದವರು ಯೇಸು ನೀತಿವಂತರಿಗಾಗಿ ಮಾತ್ರವಲ್ಲ ಎಲ್ಲರಿಗೋಸ್ಕರ ಪ್ರಾಣ ನೀಗಿದ; ಕೃಪೆಯನ್ನು ನಿರೋಧಿಸುವುದು ಸಾಧ್ಯ-ಎಂದಿದ್ದರು. ಜ್ಯಾನ್‍ಸನ್ ಪಂಥದವರು ಇವೆರಡನ್ನೂ ಒಪ್ಪದೆ ಖಂಡಿಸಿದರು.

ಜ್ಯಾನ್‍ಸನ್ ಪಂಥ ಫ್ರಾನ್ಸ್, ನೆದರಲ್‍ಲೆಂಡ್ಸ್ ಮತ್ತು ಅಂತಿಮವಾಗಿ ಇಟಲಿಗಳಲ್ಲಿ 17, 18ನೆಯ ಶತಮಾನಗಳಲ್ಲಿ ಕಾಣಿಸಿಕೊಂಡಿತು. ಕಾನ್ರ್ಯಾಲಿಸ್ ಯಾನ್‍ಸನ್ ಬರೆದ ಅಗಸ್ಟೈನಸ್ ಎಂಬ ಗ್ರಂಥ ಈ ಚಳವಳಿಗೆ ಮೂಲವಾಯಿತು. ಪೋಪರಿಂದ ಈ ಗ್ರಂಥ ಧರ್ಮಬಾಹಿರವೆಂದು ಖಂಡಿಸಲ್ಪಟ್ಟಿತು.

ಜ್ಯಾನ್‍ಸನ್ ಪಂಥದವರಲ್ಲಿ ಅತಿನಿಷ್ಠೆಯ ಭಕ್ತಿಸಂಪ್ರದಾಯ ಬೆಳೆದು ಬಂತು. ಮುಕ್ತಿಯ ಬಗೆಗೆ ತೀವ್ರ ಆತಂಕಪಟ್ಟು ಭಯವಿಹ್ವಲರಾದ ಇವರು ಮಾನವ ಸ್ವಭಾವ ಅಧೋಮುಖಿ ಎಂದೇ ಭಾವಿಸಿ ದೈಹಿಕ ದಂಡನೆಗಳ ಮೂಲಕ ಅದನ್ನು ಹತೋಟಿಯಲ್ಲಿಡಬೇಕೆಂದು ತಿಳಿದಿದ್ದರು. ಸಾಂಪ್ರದಾಯಿಕವಾಗಿ ಕ್ರೈಸ್ತಧರ್ಮದಲ್ಲಿ ನಂಬುವಂತೆ ದೇವರ ಮತ್ತು ಮನುಷ್ಯರ ನಡುವಣ ಮಧುರಬಾಂಧವ್ಯ ಇವರ ಪಾಲಿಗೆ ಉಗ್ರಸಂಬಂಧವಾಯಿತು. ದೇವರು ಹೆಕ್ಕಿ ಆರಿಸಿದ ಗಣ್ಯರು ತಾವು ಎಂಬುದು ಇವರ ಕಲ್ಪನೆ. ಹೇಗಿದ್ದರೂ ಬೈಬಲ್ ಅಧ್ಯಯನ, ಸಂಸ್ಕಾರಗಳಲ್ಲಿ ಅರ್ಥವತ್ತಾಗಿ ಭಾಗವಹಿಸುವುದು, ಶಿಸ್ತು, ನೀತಿನಿಯಮಾವಳಿಗಳ ಸ್ಮಧಾರಣೆ- ಇವೇ ಮೊದಲಾದ ರಚನಾತ್ಮಕ ನಿಲುವುಗಳನ್ನೂ ಇವರು ತಳೆದಿದ್ದ ಹಾಗೆ ಕಂಡು ಬರುತ್ತದೆ.

1640ರಿಂದ 1750ರ ವರೆಗೆ ಜ್ಯಾನ್‍ಸನ್ ಪಂಥಕ್ಕೆ ಸಂಬಂಧಪಟ್ಟ ಹಾಗೆ ಅನೇಕ ವಾದವಿವಾದಗಳು, ಅರ್ಜಿಗಳು, ಧರ್ಮಾಧಿಕಾರಿಗಳಿಂದ ಖಂಡನೆಗಳು, ಆರೋಪ ಪ್ರತ್ಯಾರೋಪಗಳು, ಸೃಷ್ಟೀಕರಣಗಳು ಆಗಿ ಹೋದವು. ಹೆಚ್ಚಾಗಿ ಫ್ರಾನ್‍ನಲ್ಲಿ ನಡೆದ ಈ ಚಳವಳಿಯಲ್ಲಿ ಧಾರ್ಮಿಕ ಕಾಳಜಿಯ ಜೊತೆಗೆ ರಾಜಕೀಯ ಹಿತಾಸಕ್ತಿಗಳೂ ಪಾತ್ರವಹಿಸಿದ್ದವು. 1750ರ ಸುಮಾರಿಗೆ ಇದಕ್ಕೆ ಸಂಬಂಧಪಟ್ಟ ಎಲ್ಲವಾದಗಳೂ ಅಧಿಕೃತವಾಗಿ ಮುಕ್ತಾಯಗೊಂಡ ಮೇಲೆ ಈ ಪಂಥ ಶಿಥಿಲವಾಗಿ ಈಗಿದು ಚಾರಿತ್ರಿಕ ಆಸಕ್ತಿಯನ್ನಷ್ಟೆ ಕೆರಳಿಸುವ ಸ್ಥಾನದಲ್ಲಿ ಉಳಿದಿದೆ.								(ಇ.ಎಸ್.ಎಸ್.ಜೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ